Shankar Nag: ಮಿಂಚಿನ ಧೃವತಾರೆ ಶಂಕರ್ ನಾಗ್

Shankar Nag – “ಸತ್ತ ಮೇಲೆ ಮಲಗೋದು ಇದ್ದೇ ಇದೆ ಬದುಕಿದ್ದಾಗಲೇ ಏನನ್ನಾದರೂ ಸಾಧಿಸಿ”.  ಈ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿದರೆ ಯಾರಿಗೆ ತಾನೆ ಜೀವನದಲ್ಲಿ ಸಾಧಿಸುವ ಛಲ ಹುಟ್ಟುವುದಿಲ್ಲ ಹೇಳಿ? ಯಾವುದೇ ಚಟುವಟಿಕೆಗಳಲ್ಲಿ ತೊಡಗಿದೆ ಜಡವಾಗಿ ಕುಳಿತಿರುವ ಸೋಮಾರಿಯೊಳಗೆ ಮಲಗಿರುವ ಮನಸ್ಸನ್ನೂ ಕೂಡ ಬಡಿದೆಬ್ಬಿಸುವಂತಹ ಮಾತಿದು. ಮಾಡಬೇಕಾದ ಕೆಲಸವನ್ನು ನಾಳೆ ಎಂಬ ಬೋರ್ಡ್ ಹಾಕಿ ‘ಇವತ್ತು ಸಾಕಾಗೋಯ್ತು ಮಲಗಿ ಬಿಡೋಣ’ ಎಂಬ ಸೋಮಾರಿಗಳ ಕಪಾಳಕ್ಕೊಡೆದು ಬದುಕಿನ ಸತ್ಯವನ್ನು ತಿಳಿಸುವ ಚಾಟಿಯ ಹೊಡೆತವಿದು 

ಅರೆ! ಯಾರಪ್ಪಾ…ಈತ ಬರೀ..ಈ ಮಾತಿನ ಬಗ್ಗೆನೇ ಕೊರೆಯುತ್ತಿದ್ದಾನಲ್ಲ… ಅಂತ ನಿಮ್ಮ ತಲೆಯಲ್ಲಿ ಒಂದು ?ಚಿಹ್ನೆ ಸುಳಿದಾಡುತ್ತಿರಬಹುದು. 

ಆದರೆ ವಿಷಯ ಇದೆ ಸಾರ್.. ಇದು ಬರಿಯ ಸಾಮಾನ್ಯವಾದ ನುಡಿಯಲ್ಲ ನುಡಿದಂತೆ ನಡೆದ ನಡೆದಂತೆ ನುಡಿದ ಒಬ್ಬ ಮೇರು ವ್ಯಕ್ತಿ ಕೊಟ್ಟಂತಹ ಮುತ್ತಿನ ಮಣಿಗಳಿವು. 

ಆ ಮಹಾವ್ಯಕ್ತಿ ಮತ್ತ್ಯಾರು ಅಲ್ಲ ಸಮಯಕ್ಕೆ ಸೆಡ್ಡು ಹೊಡೆದು ಸೂರ್ಯ-ಚಂದ್ರರಿಗೆ ಗುಡ್ ಬೈ ಹೇಳಿ ಹಗಲು-ರಾತ್ರಿ ಎನ್ನದೆ ಬಿಡುವಿಲ್ಲದ ಕೆಲಸ ಮಾಡಿದ ಪಾದರಸ. ಕನ್ನಡ ಚಿತ್ರರಂಗದಲ್ಲಿ ಮಿಂಚಿನಂತೆ ಮಿಂಚಿ ಮರೆಯಾದ ಧೃವತಾರೆ. ಆಟೋಚಾಲಕರ  ಹೃದಯದಲ್ಲಿ ಅಜರಾಮರವಾಗಿರುವ ಆಟೋರಾಜ ಕರಾಟೆ ಕಿಂಗ್ ಶಂಕರ್ ನಾಗ್. 

ಶಂಕರ್ ನಾಗ್ ಎಂದ ತಕ್ಷಣ ನಮಗೆ ನೆನಪಿಗೆ ಬರೋದು ಆ ಸುಂದರವಾದ ನಗು ಮುಖ. ಕ್ರಾಫ್ ಮಾಡಿದ ಏರ್ ಸ್ಟೈಲ್  ಅವರಿಗೆ ಅಂತಾನೇ ಹೇಳಿ ಮಾಡಿಸಿದ ಗಡ್ಡ ಒಟ್ಟಾರೆಯಾಗಿ ಸ್ಪುರದೃೂಪಿ ನಟ.

ಇದನ್ನೂ ಓದಿ; ಸದ್ಯದಲ್ಲೇ ಬೆಂಗಳೂರಿನಲ್ಲಿ ರಾಪಿಡೋ ಕ್ಯಾಬ್ ಸೇವೆ ಪ್ರಾರಂಭ

ಶಂಕರ್ ರವರು  ಕೇವಲ ನಟ ಮತ್ತು ನಿರ್ದೇಶಕ ರಲ್ಲ ಅವರು ಸಾಮಾಜಿಕ ಕಳಕಳಿಯನ್ನು ಸಮಾಜದ ಮುಂದಿನ ಭವಿಷ್ಯದ ಬಗ್ಗೆ ಮುಂದಾಲೋಚನೆ ಹೊಂದಿದಂತಹ ಬುದ್ಧಿಶಾಲಿ ಯಾಗಿದ್ದರು. 

ಶಂಕರ್ ನಾಗ್ ರವರ ಕಾಲ 1954 ರಿಂದ 1990ರ ವರೆಗೆ ಆದರೂ ಸಹ ನಾವು ಇಂದಿನ ದಿನಗಳಲ್ಲಿ ನೋಡುತ್ತಿರುವ, ಜನರು ಹೆಮ್ಮೆಯಿಂದ ಸ್ವೀಕರಿಸಿರುವ ಬೆಂಗಳೂರು ಮೆಟ್ರೋ ದಿ ಶಂಕರನಾಗ್ ಅವರ ಕನಸಿನ ಕೂಸಾಗಿತ್ತೆಂದರೆ  ನಿಮಗೆ ಅಚ್ಚರಿಯುಂಟಾಗಬಹುದು!

ಹೌದು  ಭಾರತಕ್ಕೆ ಮೊದಲ ಬಾರಿಗೆ ಮೆಟ್ರೋ ಬಂದಿದ್ದು ಡಿಸೆಂಬರ್ 24 2002 

ಕರ್ನಾಟಕದ ಬೆಂಗಳೂರಿಗೆ ಬಂದಿದ್ದು ಅಕ್ಟೋಬರ್ 20 2011ರಲ್ಲಿ

ಆದರೆ ಶಂಕರನಾಗ್ ರವರು 1980 ರಲ್ಲಿ ಅಂದರೆ ಭಾರತಕ್ಕೆ ಮೆಟ್ರೋ ಬರುವುದಕ್ಕೂ 20 ವರ್ಷಗಳ ಹಿಂದೆಯೇ   ಬೃಹತ್ತಾಗಿ ಬೆಳೆಯುತ್ತಿರುವ ಬೆಂಗಳೂರಿಗೆ  ಮೆಟ್ರೋ ರೈಲಿನ ಅಗತ್ಯದ ಬಗ್ಗೆ ತಿಳಿದು  ತಮ್ಮ ಸ್ವಂತ ಖರ್ಚಿನಲ್ಲಿ ಲಂಡನ್ನಿಗೆ ಹೋಗಿ ಮೆಟ್ರೋ ಬಗ್ಗೆ ತಿಳಿದು ನೀಲಿ ನಕ್ಷೆಯೊಂದನ್ನು ತಯಾರಿಸಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರ ಮುಂದಿಟ್ಟಿದ್ದರೆಂದರೆ ಅವರ ಸಮಕಾಲೀನರಿಗಿಂತ ಎಷ್ಟು ಮುಂದಾಲೋಚನೆ ಹೊಂದಿದ್ದರು ಎಂಬುದನ್ನು ನೀವೇ ಊಹಿಸಿ?..

ಆಡಿಯೋ ರೆಕಾರ್ಡಿಂಗ್ ಮಾಡಲು ಆಗಿನ ಕನ್ನಡ ಚಿತ್ರರಂಗದವರು ಚೆನ್ನೈ ಗೆ  ಹೋಗುತ್ತಿದ್ದರು ಇದನ್ನು ಮನಗಂಡಿದ್ದ ಶಂಕರ್ ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಸ್ಟುಡಿಯೋ ನಿರ್ಮಿಸಿ ಇಡೀ ಕನ್ನಡ  ಚಿತ್ರರಂಗವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು 

ಆಗಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆಯವರಿಗೆ ಶಂಕರ್ ಅವರು ಆತ್ಮೀಯ ಗೆಳೆಯ ಮತ್ತು ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು ತಾವು ತಯಾರಿಸಿದ ನೀಲಿನಕ್ಷೆ ಯಲ್ಲಿ ಮೆಟ್ರೋ ಯೋಜನೆ ಜೊತೆಗೆ ಸರ್ಕಾರ ನಂದಿಬೆಟ್ಟಕ್ಕೆ ರಜ್ಜು ಪಥ[rope way] ಹಾಕಬೇಕೆಂದು & ಕರ್ನಾಟಕದಲ್ಲಿರುವ ಗುಡಿಸಲುಗಳನ್ನು ತೆರವುಗೊಳಿಸಿ ಬಡ ಜನರಿಗೆ ಕಡಿಮೆ ವೆಚ್ಚದ ಫ್ಯಾಬ್ರಿಕೇಟೆಡ್ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಿ ಸರ್ಕಾರದ ಮುಂದಿಟ್ಟಿದ್ದರು ಸರ್ಕಾರವೇನಾದರೂ ಇವರ ಯೋಜನೆಗಳಿಗೆ ಜೀವತುಂಬಿದಿದ್ದರೆ ಕರ್ನಾಟಕವು ಆಗಿನ ಸಮಯದಲ್ಲೇ ಅಭಿವೃದ್ಧಿ ಹೊಂದುತಿತ್ತು 

ಶಂಕರ್ ನಾಗ್ ರವರು ತುಂಬಾ ಸರಳ ವ್ಯಕ್ತಿಯಾಗಿದ್ದರು ಅಂತಹ ದೊಡ್ಡ ನಟರಾಗಿದ್ದರೂ ಸಹ ಜನಗಳ ಜೊತೆಯಲ್ಲಿಯೇ ಬೆರೆಯುತ್ತಿದ್ದರು ತಮ್ಮ ಕೆಲಸದ ನಿಮಿತ್ತ ಎಲ್ಲಿಗಾದರೂ ಹೋಗಬೇಕೆಂದಾಗ ಅವರ ಕಾರ್ ಬರುವ ತನಕ ಕಾಯದೆ ಸಾರ್ವಜನಿಕ ಬಸ್ ಅಥವಾ ಆಟೋದಲ್ಲಿಯೇ ಹೊರಟುಬಿಡುತ್ತಿದ್ದರು

ಆದರೆ ಈಗಿನ ಯಾವ ದೊಡ್ಡ ನಟನಾಗಲಿ, ನಟಿಯಾಗಲಿ, ನಿರ್ದೇಶಕನಾಗಲಿ ಸಾರ್ವಜನಿಕ ಬಸ್ / ಆಟೋಗಳಲ್ಲಿ ಹೋಗಲು ಇಷ್ಟಪಡುತ್ತಾರೆ ಹೇಳಿ?  

ನಮಗೆ ಹೋಗೋದಾದ್ರೆ ಇಂತಹದೇ ಕಾರ್ ಆಗಬೇಕು ಅಂತ ಹೇಳುತ್ತಾರೆ. 

ಒಮ್ಮೆ ಚಿತ್ರೀಕರಣ ಮಾಡುವ ಸಮಯದಲ್ಲಿ ಶಂಕರ್ ರವರ ಪಾತ್ರಕ್ಕೆ ಒಂದು ಕೊಳೆಯಾದ ಮತ್ತು ಹರಿದ ಹಳೆಯ ಬಟ್ಟೆ ಬೇಕಾಗಿರುತ್ತದೆ ಆದರೆ ಕಾಸ್ಟ್ಯೂಮರ್ಸ್ ಅದನ್ನು ರೆಡಿ ಮಾಡಿರುವುದಿಲ್ಲ ಆಗ ಶಂಕರ್ ಅವರು ಶೂಟಿಂಗ್ ನೋಡಲು ಬಂದಿದ್ದ ಜನರಲ್ಲಿ ಒಬ್ಬ ಅಪರಿಚಿತನನ್ನು ಕರೆದು  ಆತನಿಗೆ ತಮ್ಮ ಹೊಸ ಬಟ್ಟೆಯನ್ನು ನೀಡಿ ಅವನ ಹರಿದ ಮತ್ತು ಕೊಳೆಯಾದ ಬಟ್ಟೆಯನ್ನು ತಾವು ಧರಿಸಿಕೊಂಡು ಶೂಟಿಂಗ್ ಮಾಡಿದರು ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಎಲ್ಲಿ ಸಿಗುತ್ತಾರೆ ಹೇಳಿ

ಶಂಕರ್ ನಾಗ್ ರವರು ತಾವು ಚಿತ್ರರಂಗದಲ್ಲಿದ್ದ ಅಷ್ಟು ಸಮಯದಲ್ಲಿ  ಒಮ್ಮೆಯೂ ಕೂಡ   ಕಾಸ್ಟ್ಯೂಮರ್ಸ್ ಕೈಯಲ್ಲಿ ಶೂ ಹಾಕಿಸಿಕೊಂಡಿಲ್ಲ ಅಥವಾ ಬೆಲ್ಟ್ ಹಾಕಿಸಿಕೊಂಡಿಲ್ಲ  ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು 

ಇದು ಅವರು ರಂಗಭೂಮಿಯಲ್ಲಿ ಇದ್ದು ಕಲಿತ ಮನೋಭಾವವನ್ನು ತೋರಿಸುತ್ತದೆ. 

ಶಂಕರ್ ಅವರು ಎಷ್ಟೇ ದೊಡ್ಡ ನಟರಾದರು ರಂಗಭೂಮಿಯನ್ನು ಬಿಡಲಿಲ್ಲ ಸಿನೆಮಾ ಜೊತೆಜೊತೆಗೆ ರಂಗಭೂಮಿಯ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. 

ಇವರ ಪ್ರಯೋಗಶೀಲತೆಗೆ ಕಿರೀಟಪ್ರಾಯವಾದ ಚಿತ್ರವೆಂದರೆ ಒಂದು ಮುತ್ತಿನ ಕಥೆ ಈ ಸಿನೆಮಾವನ್ನು ಸಾಗರದಾಳದಲ್ಲಿ ಚಿತ್ರಿಸಬೇಕಿತ್ತು ಆಗ ಭಾರತದಲ್ಲಿ ನೀರಿನಾಳದಲ್ಲಿನ ದೃಶ್ಯ ಸೆರೆ ಹಿಡಿಯುವ ಕ್ಯಾಮೆರಾ ಇರದಿದ್ದರಿಂದ ಶಂಕರ್ ನಾಗ್ ರವರು ಸ್ವತಃ ತಾವೇ  ಕೆನಡಾಗೆ  ಹೋಗಿ ಕ್ಯಾಮರಾ ತಂದರು ನಂತರ ಲಂಡನ್ ಗೆ ಹೋಗಿ ಚಿತ್ರದಲ್ಲಿನ ಆಕ್ಟೋಪಸ್ ಆಕೃತಿಯನ್ನು ತಂದರು ಚಿತ್ರದಲ್ಲಿ ಕನ್ನಡದ ಮೇರುನಟ ಡಾಕ್ಟರ್ ರಾಜಕುಮಾರ್ ರವರು ಆಕ್ಸಿಜನ್ ಮಾಸ್ಕ್ ಇಲ್ಲದೆ ಆಕ್ಟೋಪಸ್ ಜೊತೆ ಹೋರಾಡುವ ಸನ್ನಿವೇಶವನ್ನು ಮಾಲ್ಡಿವ್ಸ್ ನ ಸಮುದ್ರದಲ್ಲಿ  ಸೆರೆಹಿಡಿದರು. ಹೀಗೆ ಪ್ರಾಯೋಗಿಕವಾಗಿ ನಿರ್ದೇಶನ ಮಾಡಿದ ಶಂಕರ್ ನಾಗ್ ರವರು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನೀರಿನಾಳದಲ್ಲಿ ದೃಶ್ಯ ಸೆರೆ ಹಿಡಿಯುವ ಕ್ಯಾಮೆರಾ ತಂತ್ರಜ್ಞಾನವನ್ನು ತಂದಂತಹ ಕೀರ್ತಿಗೆ ಪಾತ್ರರಾಗಿದ್ದಾರೆ . 

ಆಟೋರಾಜ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಆಟೋ ಚಾಲಕರಿಗೆ ಸ್ಪೂರ್ತಿಯಾಗಿ ಅವರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಅಲ್ಲಿಯವರೆಗೆ ತಮ್ಮ ಶಕ್ತಿ ಏನೆಂಬುದರ ಪರಿಕಲ್ಪನೆಯೇ ಇಲ್ಲದ ಆಟೋಚಾಲಕರು ಆಟೋ ರಾಜ ಚಿತ್ರವನ್ನು ನೋಡಿ ಒಗ್ಗಟ್ಟಾಗಿ ಸೇರಿದರು, ಆಟೋ ನಿಲ್ದಾಣ ಹಾಗೂ ಸಂಘಗಳನ್ನು ಸ್ಥಾಪಿಸಿದರು ಶಿಸ್ತುಬದ್ಧ ಕ್ರಮವನ್ನು ಅಳವಡಿಸಿಕೊಂಡರು ಒಬ್ಬರಿಗೆ ಕಷ್ಟಬಂದಾಗ ಎಲ್ಲಾ ಆಟೋ ಚಾಲಕರು ನೆರವಾಗುವ ಮನೋಭಾವ ಬೆಳೆಸಿಕೊಂಡರು ಇವತ್ತಿಗೂ ಕರ್ನಾಟಕದಲ್ಲಿರುವ 90% ಕ್ಕೂ ಹೆಚ್ಚು ಆಟೋ ನಿಲ್ದಾಣಗಳಿಗೆ ಶಂಕರ್ ನಾಗ್ ಅವರ ಹೆಸರನ್ನು ಇಡಲಾಗಿದೆ. 

ಆದರೆ  ಇಂತಹ ಮಹಾನ್ ವ್ಯಕ್ತಿಯ ಯಶಸ್ಸನ್ನು ಕಂಡು ಆ ದೇವರಿಗೂ ಕೂಡಾ ಸಹಿಸಿಕೊಳ್ಳಲು ಆಗಲಿಲ್ಲ ವೆಂದೆನಿಸುತ್ತದೆ.ಆ ಕರಾಳ ದಿನ ಸೆಪ್ಟೆಂಬರ್ 30 1990ರಲ್ಲಿ ನಡೆದ ಅಪಘಾತವೊಂದರಲ್ಲಿ ಶಂಕರ್ ರವರು ಜೀವನದ ಪಯಣ ಮುಗಿಸಿ ಇಹಲೋಕ ತ್ಯಜಿಸಿದರು ಅವರು ದೈಹಿಕವಾಗಿ ನಮ್ಮನ್ನು ಅಗಲಿದರು ಅವರ ಕಾರ್ಯಗಳು ಮತ್ತು ಅವರ ಸಿನಿಮಾಗಳು ನಮ್ಮನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ.

ಹೀಗೆ ಶಂಕರ್ ರವರಿಗೆ  ಕಾಲಕ್ಕಿಂತಲೂ ಹೆಚ್ಚು ವೇಗವಾಗಿ ಯೋಚಿಸುವ ಯೋಜಿಸುವ ಸಾಮರ್ಥ್ಯ ಹುಟ್ಟಿನಿಂದಲೂ ಇತ್ತೆಂದರೆ ಅತಿಶಯೋಕ್ತಿಯಲ್ಲ. ಅವರ ಮುಂದಾಲೋಚನೆ ಹಾಗಿನ ಎಂಜಿನಿಯರ್ ಗಳಿಗೂ ಇರಲಿಲ್ಲವೆಂದು ಕಾಣುತ್ತದೆ.

ಇಂದಿನ ನಮ್ಮಂತಹ  ಯುವಕರು ಯಾವ ರೀತಿ ಬದುಕಬೇಕು ಎಂಬುದಕ್ಕೆ ಶಂಕರ್ ನಾಗ್ ಅವರು ದಾರಿ ದೀಪವಾಗಿದ್ದಾರೆ.

Latest Trending

Follow us on Instagram Bangalore Today

Hemanth Kumar B
Hemanth Kumar B
Articles: 1

Leave a Reply

Your email address will not be published. Required fields are marked *